ಕ್ರಿಯಾ ಯೋಜನೆಗೆ ಅನುಮೋದನೆ ಕೋವಿಡ್ , ತುರ್ತು ಪರಿಸ್ಥಿತಿ ನಿರ್ವಹಣೆಗೆ ಆದ್ಯತೆ-ಹಿರೇಮಠ

ನೆಹರು ಯುವ ಕೇಂದ್ರದ ಸಲಹಾ ಸಮಿತಿ ಸಭೆ

0 58

ಬೆಳಗಾವಿ: ಪ್ರಸಕ್ತ ವರ್ಷ ಕೋವಿಡ್-19 ನಿಯಂತ್ರಣ ಹಾಗೂ ಪ್ರವಾಹ ಮತ್ತಿತರ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಸೇವೆಗೆ ಸಿದ್ಧವಾಗಿರುವ ಯುವಕರ ತಂಡವನ್ನು ಸಜ್ಜುಗೊಳಿಸಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ 2020-21 ನೇ ಸಾಲಿನ ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಕಡಿಮೆಯಾಗಿದ್ದು, ಎಲ್ಲ ಕಡೆಗಳಲ್ಲೂ ಆಕ್ಸಿಜನ್ ಹಾಸಿಗೆ ವ್ಯವಸ್ಥೆ ಸಮರ್ಪಕವಾಗಿದೆ. ಆಕ್ಸಿಜನ್ ಕೊರತೆಯಿಲ್ಲ. ಸಾರ್ವಜನಿಕರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಕೋವಿಡ್-19 ನಿಯಂತ್ರಣ ಸುಲಭ ಸಾಧ್ಯವಿದೆ. ಆದ್ದರಿಂದ ಕಡ್ಡಾಯವಾಗಿ ಮಾಸ್ಕ್ ಬಳಸಬೇಕಿದೆ.

ನೆಹರು ಯುವ ಕೇಂದ್ರದ ಪ್ರಸಕ್ತ ಸಾಲಿನ ಎಲ್ಲ ಚಟುವಟಿಕೆ ಮತ್ತು ಕಾರ್ಯಕ್ರಮಗಳಲ್ಲೂ ಯೂಥ್ ಕ್ಲಬ್ ಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲು ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ನಿರ್ದೇಶನ ನೀಡಿದರು.

ಯುವ ತಂಡ ಸಜ್ಜುಗೊಳಿಸಲು ಸಲಹೆ:

ಯುವ ಕೇಂದ್ರದಿಂದ ತರಬೇತಿ ಪಡೆದಿರುವ ತಂಡಗಳನ್ನು ಪ್ರವಾಹ ಮತ್ತಿತರ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆ ಜತೆಗೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಜತೆ ಕೈಜೋಡಿಸಲು ಅನುಕೂಲವಾಗುವಂತೆ ಸದಾ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಪ್ರತಿ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳುವಂತೆ ಯುವ ಕೇಂದ್ರ ಚಟುವಟಿಕೆಗಳನ್ನು ಆಯೋಜಿಸುವಂತೆ ತಿಳಿಸಿದರು.

ನೆಹರು ಯುವ ಕೇಂದ್ರಕ್ಕೆ ಕಚೇರಿ ಒದಗಿಸಿಕೊಡುವ ಬಗ್ಗೆ ಮನವಿ ಸಲ್ಲಿಸಿದರೆ ಸರ್ಕಾರಿ ಕಟ್ಟಡವನ್ನು ಒದಗಿಸಲು ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ಹಿರೇಮಠ ಭರವಸೆ ನೀಡಿದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ರೋಹಿತ್ ಕಲರಾ, ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಗಳ ಕುರಿತು ವಿವರಿಸಿದರು.

ಲೆಕ್ಕಾಧಿಕಾರಿ ಆರ್.ಆರ್.ಮುತಾಲಿಕ ದೇಸಾಯಿ, ಪ್ರಸಕ್ತ ಸಾಲಿನಲ್ಲಿ ಕೋವಿಡ್-19 ಇರುವುದರಿಂದ ಕ್ರಿಯಾ ಯೋಜನೆಯಡಿ ತಾಲ್ಲೂಕುವಾರು ಕಾರ್ಯಕ್ರಮಗಳನ್ನು ಹಂಚಿಕೆ ಮಾಡಲಾಗಿದೆ. “ಏಕ ಭಾರತ ಶ್ರೇಷ್ಠ ಭಾರತ” ಮತ್ತು ” ಆತ್ಮನಿರ್ಭರ್ ಭಾರತ” ಈ ವರ್ಷದ ಪ್ರಮುಖ ವಿಷಯಗಳಾಗಿದ್ದು, ಇವುಗಳ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಇದಲ್ಲದೇ ಕೋವಿಡ್-19 ಅರಿವು ಹಾಗೂ ಯುವಕರಿಗೆ ಪ್ರಕೃತಿ ವಿಕೋಪ ನಿರ್ವಹಣೆಯ ಪೂರ್ವಸಿದ್ಧತಾ ತರಬೇತಿ, ಕೌಶಲ ಅಭಿವೃದ್ಧಿ, ಕ್ರೀಡಾಕೂಟ, ಸ್ವಚ್ಛಗ್ರಾಮ,  ಯುವ ಸಮಾವೇಶ, ಜಲಜಾಗರಣ ಅಭಿಯಾನ ಮತ್ತಿತರ ಕಾರ್ಯಕ್ರಮಗಳಿಗೆ ಕ್ರಿಯಾ ಯೋಜನೆಯಡಿ ಅನುಮೋದನೆ ನೀಡಲಾಗಿದೆ ಎಂದು ಮುತಾಲಿಕ್ ದೇಸಾಯಿ ವಿವರಿಸಿದರು.

ನೆಹರು ಯುವ ಕೇಂದ್ರದ 2020-21 ನೇ ಸಾಲಿನ ಕ್ರಿಯಾ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಜಿಲ್ಲಾ ಯುವ ಕಾರ್ಯಕ್ರಮಗಳ ಸಲಹಾ ಸಮಿತಿಯ ಸದಸ್ಯರಾಗಿರುವ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಹುಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಡಿ.ಎನ್.ಮಿಸಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ನೆಹರು ಯುವ ಕೇಂದ್ರದ ನಿವೃತ್ತ ಸಮನ್ವಯಾಧಿಕಾರಿ ಎಸ್.ಯು.ಜಮಾದಾರ, ಕಲಾತಂಡದ ಭರತ ಕಲಾಚಂದ್ರ, ಮಹಿಳಾ ಕಲ್ಯಾಣ ಸಂಸ್ಥೆಯ ವಿಜಯಂತಿ ಚೌಗಲಾ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.