ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ನವೆಂಬರ್ ೧ ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ತಮ್ಮ ಮನೆ ಮನೆಗಳ ಮೇಲೆ ಕಪ್ಪು ಬಲೂನ್ಗಳನ್ನು ಹಾರಿಸುವ ಮೂಲಕ ಕನ್ನಡಿಗರನ್ನು ಕೆರಳಿಸುವಂತಹ ದುಸ್ಸಾಹಸಕ್ಕೆ ಮುಂದಾಗಿದೆ.
ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನಾಚರಣೆ ಆಚರಿಸುತ್ತ ಬಂದಿದ್ದ ಎಂಇಎಸ್ಗೆ ಈ ಬಾರಿ ಜಿಲ್ಲಾಡಳಿತ ಕೋವಿಡ್ ಕಾರಣದಿಂದ ಈ ಬಾರಿ ಕರಾಳ ದಿನಾಚರಣೆಗೆ ಅನುಮತಿ ಕೊಡಲು ನಿರಾಕರಿಸಿದೆ. ಆದರೆ, ಎಂಇಎಸ್ ಹೇಗಾದರೂ ಮಾಡಿಯಾದರೂ ಈ ಬಾರಿಯೂ ಕರಾಳ ದಿನಾಚರಣೆ ಆಚರಿಸಿಯೇ ತೀರಬೇಕೆಂಬ ವಿತಂಡವಾದ ಮಾಡುತ್ತ, ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದೆ. ಬರೋಬ್ಬರಿ ೧ ಲಕ್ಷ ಕಪ್ಪು ಬಲೂನ್ಗಳನ್ನು ಹಾರಿಸಲು ಕುತಂತ್ರ ಮಾಡಿದೆ. ಅಲ್ಲದೇ, ಕರ್ನಾಟಕ- ಮಹಾರಾಷ್ಟ್ರ ಗಡಿಭಾಗದಲ್ಲಿರುವ ಮರಾಠಿ ಭಾಷಿಕರ ಮೇಲೆ ಕರ್ನಾಟಕ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಕರಾಳ ದಿನಾಚರಣೆ ಸಾಯಕಲ್ ರ್ಯಾಲಿಗೆ ಅನುಮತಿ ನಿರಾಕರಿಸಿದೆ. ಮರಾಠಿ ಭಾಷಿಕರ ಮೇಲೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಎಂಇಎಸ್ ನಾಯಕರು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಪತ್ರ ಬರೆದಿದ್ದಾರೆ.
ಜಿಲ್ಲಾಡಳಿತದ ದಿಟ್ಟ ಕ್ರಮದಿಂದಾಗಿ ಕಂಗಾಲಾಗಿರುವ ಎಂಇಎಸ್ ತನ್ನ ಅಸ್ತಿತ್ವ ಉಳಿವಿಗೆ ಇದೀಗ ಹೊಸ ವರಸೆ ಮೂಲಕ ಕಿತಾಪತಿ ಮುಂದುವರೆಸಿದೆ. ಪದೇ ಪದೆ ಕರ್ನಾಟಕ ಸರ್ಕಾರದ ವಿರುದ್ಧ ವಿನಾಕಾರಣ ಕಾಲು ಕೆದರಿ ಕಪ್ಪು ಬಲೂನ್ಗಳನ್ನು ಹಾರಿಸಿ ಕನ್ನಡಿಗರನ್ನು ಕೆರಳಿಸುವಂತೆ ಮಾಡುತ್ತಿರುವ ಎಂಇಎಸ್ ಕಿತಾಪತಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.