ಬೆಳಗಾವಿ: ಬಹುನಿರೀಕ್ಷಿತ ಕೋವಿಡ್-19 ಲಸಿಕೆಗಳು ಬುಧವಾರ ನಸುಕಿನಜಾವ ನಗರಕ್ಕೆ ಬಂದು ತಲುಪಿದವು.
ಪುಣೆಯ ಸೀರಂ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿರುವ ಕೋವಿಶೀಲ್ಡ್ ಲಸಿಕೆಗಳ ಬಾಕ್ಸ್ ಗಳನ್ನು ಹೊತ್ತ ವಾಹನವು ಕೊಗನೊಳ್ಳಿ ಚೆಕ್ ಪೆÇೀಸ್ಟ್ ಮೂಲಕ ನಗರದ ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೆÇೀಗೆ ಆಗಮಿಸಿತು.
ಅದೇ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ವ್ಯಾಕ್ಸಿನ್ ಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡರು.
ಸರ್ಕಾರದ ಸೂಚನೆಯಂತೆ ಆಯಾ ಜಿಲ್ಲೆಗಳಿಗೆ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ಕೂಡ ನೀಡಿದರು.
ಒಟ್ಟಾರೆ 1.47 ಲಕ್ಷ ಲಸಿಕೆ ಆಗಮನ:
ಬೆಳಗಾವಿ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳಲ್ಲಿ ವಿತರಿಸಲು ನೀಡಲಾಗಿರುವ ಒಟ್ಟಾರೆ 1.47 ಲಕ್ಷ ಲಸಿಕೆಗಳು ಬೆಳಗಾವಿಯಲ್ಲಿ ಸಂಗ್ರಹಿಸಲಾಗಿದೆ.
ಒಟ್ಟು 13 ಬಾಕ್ಸ್ ಗಳಲ್ಲಿ ಬಂದಿರುವ ಲಸಿಕೆಗಳ ಪೈಕಿ ಕೆಲವು ಬಾಕ್ಸ್ ಗಳನ್ನು ಬಾಗಲಕೋಟೆಯಲ್ಲಿರುವ ಪ್ರಾದೇಶಿಕ ಲಸಿಕಾ ಘಟಕಕ್ಕೆ ಕಳಿಸಲಾಗುತ್ತಿದ್ದು, ಪೂರ್ವ ನಿಗದಿಯಂತೆ ಜ.16 ರಿಂದ ಲಸಿಕಾ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಆರ್ಸಿ.ಎಚ್. ಡಾ.ಆರ್.ಐ.ಗಡಾದ ತಿಳಿಸಿದ್ದಾರೆ.
ಬಾಗಲಕೋಟೆಯ ಪ್ರಾದೇಶಿಕ ಲಸಿಕಾ ಘಟಕದ ಮೂಲಕ ಬಾಗಲಕೋಟೆ, ವಿಜಯಪುರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಲಸಿಕೆ ವಿತರಣೆ ನಡೆಯಲಿದೆ.
ಅದೇ ರೀತಿ ಬೆಳಗಾವಿ ಘಟಕದ ಮೂಲಕ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಲಸಿಕೆಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.