‘ಏಕ ಭಾರತ; ಶ್ರೇಷ್ಠ ಭಾರತ’ ನಿರ್ಮಿಸೋಣ: ರಾಜ್ಯಪಾಲ ಥಾವರಚಂದ್ ಗೆಹ್ಲೊಟ್

0 17

ಬೆಳಗಾವಿ: ಯುವ ಸಮುದಾಯವು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸಿ ‘ಏಕ ಭಾರತ ಶ್ರೇಷ್ಠ ಭಾರತ’ ನಿರ್ಮಿಸುವ ಗುರಿಯನ್ನು ಹೊಂದಬೇಕಿದೆ. ಭಾರತಕ್ಕೆ ವಿಶ್ವಗುರುವಿನ ಗೌರವವನ್ನು ಮತ್ತೆ ದೊರಕಿಸಿಕೊಡುವ ನಿಟ್ಟಿನಲ್ಲಿ ‌ನಾವೆಲ್ಲರೂ ದೃಢಹೆಜ್ಜೆಯನ್ನು ಇಡಬೇಕಿದೆ ಎಂದು ಘನತೆವೆತ್ತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೊಟ್ ಅವರು ಕರೆ ನೀಡಿದರು.

ಸುವರ್ಣ ವಿಧಾನಸೌಧ ಸೆಂಟ್ರಲ್ ಸಭಾಂಗಣದಲ್ಲಿ ಬುಧವಾರ  ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 9 ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜ್ಞಾನ ಗಳಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿಗೆ ಸುಲಭ ದಾರಿ ದೊರಕುತ್ತದೆ. ಹೊಸ ಹೊಸ ಆವಿಷ್ಕಾರಗಳನ್ನು ಅರಿತುಕೊಳ್ಳಲು ಶಿಕ್ಷಣ ಅತ್ಯಗತ್ಯವಾಗಿದೆ.
ಸ್ವಯಂ ಉದ್ಯೋಗದ ಕಡೆಗೆ ಒಲವು ಬೆಳೆಸಿ ದೇಶದ ಪ್ರಗತಿಗೆ ಕೈಜೋಡಿಸಲು ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ.
ಸ್ವಾವಲಂಬಿ ಬದುಕು ಮತ್ತು ಸ್ವಾವಲಂಬಿ‌ ಭಾರತ ನಿರ್ಮಾಣದ ದಿಸೆಯಲ್ಲಿ ಯುವ ಸಮುದಾಯವನ್ನು ಕೊಂಡೊಯ್ಯಲು ಉನ್ನತ ಶಿಕ್ಷಣ ಅತ್ಯಗತ್ಯವಾಗಿದೆ.
ವಿದ್ಯಾರ್ಥಿಗಳು ಶಿಕ್ಷಣದ ಬಳಿಕ ತಮ್ಮ ಸಮಾಜ ಮತ್ತು ದೇಶದ ಬಗ್ಗೆ ಗೌರವಾದರಗಳನ್ನು ಬೆಳೆಸಿಕೊಂಡು ಆತ್ಮ ಸಂತೃಪ್ತಿಯ ಜತೆಗೆ ಉತ್ತಮ ಬದುಕು ರೂಪಿಸಿಕೊಳ್ಳಬೇಕು.

ಘಟಿಕೋತ್ಸವ ಸಮಾರಂಭದ ಹಿನ್ನಲೆಯು ಇಂದು ನಿನ್ನೆಯದಲ್ಲ; ಗುರುಕುಲದ ಕಾಲದಿಂದ ನಿರಂತರವಾಗಿ ನಡೆದುಬರುತ್ತಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಇದೊಂದು ಖುಷಿ ಮತ್ತು ಭಾವನಾತ್ಮಕ ದಿನವಾಗಿದೆ.

ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನ ಹೆಸರಿನ
ರಾಣಿ ಚೆನ್ನಮ್ಮ ವಿವಿಗೆ ಚನ್ನಮ್ಮನ ಹೋರಾಟವು ಪ್ರೇರಣಾಶಕ್ತಿಯಾಗಲಿ. ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಕರ್ಮಭೂಮಿ ನೋಡಿದ್ದ ನನಗೆ ರಾಣಿ ಚೆನ್ನಮ್ಮ ಕರ್ಮಭೂಮಿಗೆ ಭೇಟಿ ನೀಡಿದ ಬಳಿಕ ಧನ್ಯತಾಭಾವನೆ ಮೂಡಿತು. ಸ್ವಾತಂತ್ರ್ಯ ಉಳಿಸಿಕೊಂಡು ಹೋಗಲು ರಾಣಿ ಚೆನ್ನಮ್ಮ ಮತ್ತಿತರ ತ್ಯಾಗ ಮತ್ತು ಹೋರಾಟ ‌ನಮಗೆ ಪ್ರೇರಣಾದಾಯಕವಾಗಿದೆ ಎಂದರು.

ಸರಕಾರ ನೀಡಿರುವ 127 ಎಕರೆ ಜಾಗೆಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಆದಷ್ಟು ಬೇಗ ನಿರ್ಮಿಸುವ ಮೂಲಕ ಎಲ್ಲ ಸೌಕರ್ಯಗಳು ವಿದ್ಯಾರ್ಥಿಗಳಿಗೆ ಲಭಿಸುವಂತಾಗಲಿ ಎಂದು ಘನತೆವೆತ್ತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೊಟ್ ಅವರು ಆಶಿಸಿದರು.

ಮೂವರಿಗೆ ಗೌರವ ಡಾಕ್ಟರೇಟ್:

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮಹನೀಯರಮ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಪದ್ಮಶ್ರೀ ಪುರಸ್ಕೃತರಾದ ಡಾ. ಹೆಚ್.ಸುದರ್ಶನ ಬಲ್ಲಾಳ ಇವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ” ಡಾಕ್ಟರ್ ಆರ್ ಸೈನ್ಸ್ “, ವಾದಿರಾಜ ಬಿ.ದೇಶಪಾಂಡೆ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ” ಡಾಕ್ಟರ್ ಆರ್ ಲೆಟರ್ಸ್” ಗೌರವ ಡಾಕ್ಟರೇಟ್ ಪದಿವಿಯನ್ನು ಪ್ರದಾನ ಮಾಡಲಾಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪಂಡಿತ್ ರಾಜೀವ ತಾರಾನಾಥ ಇವರಿಗೆ ಭಾರತೀಯ ಸಂಗೀತ ಕ್ಷೇತ್ರದಲ್ಲಿ “ಡಾಕ್ಟರ್ ಆಪ್ ಲೆಟರ್ಸ್” ಪ್ರಕಟಿಸಲಾಗಿದ್ದು, ಅವರು ಅನುಪಸ್ಥಿತರಿದ್ದರು.

ಭವಿಷ್ಯದ ಸವಾಲು‌ ಎದುರಿಸಲು ಯುವ ಸಮುದಾಯ ಅಣಿಗೊಳಿಸಲು ಕರೆ:

ಘಟಿಕೋತ್ಸವ ಭಾಷಣವನ್ನು ಮಾಡಿದ ನವದೆಹಲಿಯ ಅಂತರ್ ರಾಷ್ಟ್ರೀಯ ಜೆನೆಟಿಕ್ ಎಂಜಿನಿಯರಿಂಗ್ ಮತ್ತು ಬಯೋಟೆಕ್ನಾಲಜಿ ಕೇಂದ್ರದ ನಿರ್ದೇಶಕ ಮತ್ತು ನ್ಯಾಕ್ ಕಾರ್ಯಕಾರಿ ಸಮಿತಿಯ ಚೇರಮನ್ ಪ್ರೊ.ವಿ.ಎಸ್.ಚೌಹಾನ್ ಅವರು, ಜ್ಞಾನವನ್ನು ಸೃಷ್ಟಿಸುವುದರ ಜತೆಗೆ ಮನುಕುಲದ ಭವಿಷ್ಯದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಅಣಿಗೊಳಿಸುವುದು ಉನ್ನತ ಶಿಕ್ಷಣದ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.

ಭಾರತದ ಉನ್ನತ ಶೈಕ್ಷಣಿಕ ವ್ಯವಸ್ಥೆಯು ಜಗತ್ತಿನ ಎರಡನೇ ಸ್ಥಾನದಲ್ಲಿದ್ದರೂ ಸಂಕೀರ್ಣಾವಸ್ಥೆಯಲ್ಲಿದೆ. ಪ್ರಸ್ತುತ ದೇಶದಲ್ಲಿ 960ಕ್ಕೂ ಅಧಿಕ ವಿಶ್ವವಿದ್ಯಾಲಯ; 45 ಸಾವಿರ‌ ಕಾಲೇಜುಗಳಲ್ಲಿ 3.7 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಬ್ರಿಟೀಷರು ಭಾರತ ಬಿಟ್ಟು ತೆರಳಿದ ಈ 75 ವರ್ಷಗಳಲ್ಲಿ ಶೈಕ್ಷಣಿಕವಾಗಿ ದೇಶ ಅಗಾಧ ಸಾಧನೆಗೈದಿದೆ. ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಶಿಕ್ಷಣ ಮಾಡಿದೆ.
ಆದಾಗ್ಯೂ ಹಲವಾರು ಕಂದಕಗಳಿವೆ. ಶ್ರೀಮಂತರು-ಬಡವರ ನಡುವಿನ ಅಂತರ ಹೆಚ್ಚಿದೆ. ನಾವು ಸರಕಾರಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು. ಈಗ ಸಂಕೀರ್ಣ ಸಮಯದಲ್ಲಿದ್ದೇವೆ. ಎರಡು ವರ್ಷಗಳಲ್ಲಿ ಕೋವಿಡ್ ವೈರಸ್ ನಿಂದ ಹತ್ತಾರು ಬದಲಾವಣೆಗಳಾಗಿವೆ.

ಪ್ರತಿ ಹತ್ತು ವರ್ಷಗಳ ಅವಧಿಯಲ್ಲಿ ಒಂದೊಂದು ಬಗೆಯ ಸಾಂಕ್ರಾಮಿಕಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ಇದರ ಪರಿಣಾಮವನ್ನು ಅರಿತುಕೊಳ್ಳಲು ವರ್ಷಗಟ್ಟಲೇ ಬೇಕಾಗುತ್ತಿದೆ.

ವಿಜ್ಞಾನ ತ್ವರಿತಗತಿಯಲ್ಲಿ ಬೆಳೆಯುತ್ತಿದ್ದು, ಇದರಿಂದಾಗಿ ಲಸಿಕೆ ಮತ್ತಿತರ ಸೌಲಭ್ಯಗಳನ್ನು ಪಡೆಯುವುದು ಸುಲಭ ಸಾಧ್ಯವಾಗುತ್ತಿದೆ. ಭಾರತದಂತಹ ದೇಶದಲ್ಲಿ ವಿವಿಧ ಬಗೆಯ ಲಸಿಕೆ ದೊರೆಯುತ್ತಿರುವುದಕ್ಕೆ ನಾವು ಹೆಮ್ಮೆ ಪಡಬೇಕು.

ಸ್ವಾಮಿ ವಿವೇಕಾನಂದರ ಕನಸಿನಂತೆ ಸೂಕ್ತ ಅವಕಾಶಗಳು; ನ್ಯಾಯ, ನೈತಿಕ ಮೌಲ್ಯಗಳೊಂದಿಗೆ ಭಾರವು ಸದೃಢವಾಗುವುದರ ಜತೆಗೆ ನಿಜವಾದ ಅರ್ಥದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮುವುದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಅಗತ್ಯ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಕೆಲಸವಾಗಬೇಕಿದೆ ಎಂದು ಪ್ರೊ.ವಿ.ಎಸ್.ಚೌಹಾನ್ ಅವರು ಹೇಳಿದರು.

Leave A Reply

Your email address will not be published.