ಅನುದಾನ ವಾಪಸ್ ಪಡೆಯಲು ಸರ್ವ ಪ್ರಯತ್ನ: ಸಿಇಒ ದರ್ಶನ

ಜಿಲ್ಲಾ ಪಂಚಾಯತ ಸಾಮಾನ್ಯ ಸಭೆ

0 46

ಬೆಳಗಾವಿ: ಲ್ಯಾಪ್ಸ್ ಆಗಿರುವ ಕಳೆದ ವರ್ಷದ ಜಿಲ್ಲಾ ಪಂಚಾಯತ ಅನುದಾನವನ್ನು ಮರಳಿ ಪಡೆಯುವ ಕುರಿತು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸುವುದು ಸೇರಿದಂತೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ ಸಿಇಒ ದರ್ಶನ. ಎಚ್.ವಿ. ಅವರು ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಲ್ಯಾಪ್ಸ ಆಗಿರುವ ಅನುದಾನದ ಬಗ್ಗೆ ಈಗಾಗಲೇ ಮಾಹಿತಿಯನ್ನು ಪಡೆದುಕೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ‌ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.

ಲ್ಯಾಪ್ಸ್ ಆಗಿರುವ ಕಳೆದ ವರ್ಷದ ಅನುದಾನ ಮತ್ತೆ ಒದಗಿಸಲು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳಿಸಬಹುದು. ಅಂದಾಗ ಮಾತ್ರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬಹುದು ಎಂದರು.

ಅನುದಾನ ಲ್ಯಾಪ್ಸ್ ಆಗಿರುವುದಕ್ಕೆ ಸಂಬಂಧಿಸಿದಂತೆ ಖಜಾನೆ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಸಿಇಓ ದರ್ಶನ್ ತಿಳಿಸಿದರು.

ಅನುದಾನ ಲ್ಯಾಪ್ಸ್; ತನಿಖೆಗೆ ಸಮಿತಿ ರಚನೆ:

ಅನುದಾನ ಲ್ಯಾಪ್ಸ್ ಆಗಿರುವ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಲು ಉಪ ಕಾರ್ಯದರ್ಶಿಗಳ ನೇತೃತ್ವದ ಮೂರು ಅಧಿಕಾರಿಗಳ ಸಮಿತಿಯನ್ನು ರಚಿಸಲಾಗುವುದು. ಸಮಿತಿಯು ಸಮಗ್ರ ಮಾಹಿತಿಯನ್ನು ಕಲೆಹಾಕುವುದರ ಜತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಲಿದೆ.
ಇದಾದ ಬಳಿಕ ಅಧಿಕಾರಿಗಳ ತಪ್ಪು ಕಂಡುಬಂದರೆ ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಇಓ ತಿಳಿಸಿದರು.

ಬಹುತೇಕ ಇಲಾಖೆಯವರು ಮಾರ್ಚ್ ಅಂತ್ಯದೊಳಗೆ ಬಿಲ್ ಗಳನ್ನು ಖಜಾನೆಗೆ ಸಲ್ಲಿಸಲಾಗಿದ್ದು, ವಿಳಂಬವಾಗಿದ್ದರಿಂದ ಅನುದಾನ ಲ್ಯಾಪ್ಸ್ ಆಗಿರುತ್ತದೆ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಸಭೆಗೆ ಮಾಹಿತಿಯನ್ನು ನೀಡಿದರು.

ಮಾರ್ಚ್ 24 ರಂದು ಸಲ್ಲಿಸಿರುವ ಬಿಲ್ ಗಳನ್ನು ಪಾಸ್ ಮಾಡದೇ ಅನುದಾನ ಲ್ಯಾಪ್ಸ್ ಗೆ ಕಾರಣರಾದ ಹಾಗೂ ಕರ್ತವ್ಯಲೋಪ ಎಸಗಿದ ಖಜಾನೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದುಜಿಪಂ ಸದಸ್ಯ ಶಂಕರ ಮಾಡಲಗಿ ಹಾಗೂ ರಮೇಶ್ ದೇಶಪಾಂಡೆ ಸಭೆಯಲ್ಲಿ ಒತ್ತಾಯಿಸಿದರು.

ಅನುದಾನ ಲ್ಯಾಪ್ಸ್ ಆಗಿರುವ ಬಗ್ಗೆ ಸರ್ಕಾರಕ್ಕೆ ಇದುವರೆಗೆ ಯಾಕೆ ವರದಿ ಕಳಿಸಿಲ್ಲ ಎಂದು ಜಿಲ್ಲಾ ಪಂಚಾಯತ ಸದಸ್ಯರು ಪ್ರಶ್ನಿಸಿದರು.
ಅನುದಾನ ಬಳಕೆಯ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿರುವ ಹಾಗೂ ಅನುದಾನ ಹಿಂದಿರುಗಲು ಕಾರಣರಾದ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲವು ಸದಸ್ಯರು ಒತ್ತಾಯಿಸಿದರು.

ಈಗಾಗಲೇ ಎಲ್ಲ ಇಲಾಖೆಗಳಿಂದ ಸಮಗ್ರ ಮಾಹಿತಿಯನ್ನು ಕ್ರೋಢೀಕರಿಸಲಾಗಿದ್ದು, ಸಭೆಯಲ್ಲಿ ಚರ್ಚಿಸಿದ ಬಳಿಕ ಸರಕಾರಕ್ಕೆ ವರದಿಯನ್ನು ಕಳಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ ತಿಳಿಸಿದರು.

ಸ್ಥಾಯಿ ಸಮೀತಿ ರಚನೆ ಮಾಡಲು ಶೀಘ್ರ ದಿನಾಂಕ ನಿಗದಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಐಹೊಳೆ ಅವರು ತಿಳಿಸಿದರು.

ಈ ವೇಳೆ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲಾ ಪಂಚಾಯತ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.