ಸಿಎಂ ಯಡಿಯೂರಪ್ಪ ವಿರುದ್ಧ ವಾಟಾಳ್ ನಾಗರಾಜ್ ಕಿಡಿ

ಪೊಲೀಸರ ಕಣ್ಣುತಪ್ಪಿಸಿ ಸರ್ಕಾರಿ ಬಸ್‌ನಲ್ಲಿ ಸುವರ್ಣಸೌಧಕ್ಕೆ ಆಗಮಿಸಿದ ವಾಟಾಳ ನಾಗರಾಜ್

0 60

ಬೆಳಗಾವಿ: ನಾನು ಶಾಸನಸಭೆಗೆ ಬಂದರೆ ಯಡಿಯೂರಪ್ಪನವರ ಚಡ್ಡಿಯಲ್ಲಿ ನೀರು ಇಳಿಸುತ್ತೇನೆ ಎಂದು ವಾಟಾಳ ಪಕ್ಷದ ವಾಟಾಳ್ ನಾಗರಾಜ ಅವರು ಹರಿಹಾಯ್ದಿದ್ದಾರೆ.
ಸುವರ್ಣವಿಧಾನಸೌಧದಲ್ಲಿ ಅಧಿವೇಶನ ನಡೆಸುವಂತೆ ಆಗ್ರಹಿಸಿ ಸುವರ್ಣವಿಧಾನಸೌಧದ ಎದುರು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ಮಾಡುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಸರ್ವಾಧಿಕಾರಿ. ದ್ವೇಷ, ಅಸೂಯೆ, ಭ್ರಷ್ಟಾಚಾರದ ದೊರೆ, ಪಕ್ಷಾಂತರದ ಮಹಾಪ್ರಭು ಅವರಾಗಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಸಿಎಂ ನೋಡಿರಲಿಲ್ಲ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ನಾನು ಹಿರಿಯ ರಾಜಕಾರಣಿ, ಯಡಿಯೂರಪ್ಪ ನನ್ನ ಜ್ಯೂನಿಯರ್. ಇವರಿಗೆ ರಾಜ್ಯ, ಪ್ರಜಾಪ್ರಭುತ್ವ, ಚಿಂತನೆ ಗೊತ್ತಿಲ್ಲ. ಶಾಸನಸಭೆಯನ್ನು ಅತ್ಯಂತ ಕೆಳಮಟ್ಟದಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ಪಕ್ಷಾಂತರ, ಲೂಟಿ ಮಾಡೋದು ಮಾತ್ರ ಇವರಿಗೆ ಗೊತ್ತು. ಯಡಿಯೂರಪ್ಪ ವರ್ಷಕ್ಕೆ ಒಂದೇ ಸಾರಿ ನಗೋದು. ಮೂರ್ನಾಲ್ಕು ಬಾರಿ ಸಿಎಂ ಆಗಿ ಒಂದು ಎಂಟು ಸಾರಿ ನಕ್ಕಿರಬಹುದು. ನಗುವ ನರಗಳೇ ಇಲ್ಲ ಅವರಿಗೆ, ಆ ಮಾಂಸ ಖಂಡಗಳೇ ಇಲ್ಲ ಬಹಳ ದ್ವೇಷ, ಅಸೂಯೆ ಇದೆ ಅವರಿಗೆ ಎಂದರು.
ಯಾರನ್ನು ಕಂಡರೂ ದ್ವೇಷ ಇಂತವರ ಕೈಗೆ ನಮ್ಮ ರಾಜ್ಯ ಸಿಕ್ಕಿದೆ. ಇದು ಸರ್ವಾಧಿಕಾರಿಗಳ ರಾಜ್ಯ. ನಾನು ಚಾಲೆಂಜ್ ಮಾಡ್ತೀನಿ ಇರುವ ಮಂತ್ರಿಗಳು ಯಡಿಯೂರಪ್ಪಗೆ ಪ್ರಶ್ನೆ ಮಾಡಿ, ಯಡಿಯೂರಪ್ಪಗೆ ಪ್ರಶ್ನೆ ಮಾಡುವ ತಾಕತ್ತು ಯಾರಿಗೂ ಇಲ್ಲ. ೨೨೪ ಶಾಸಕರಿಗೆ, ಯಡಿಯೂರಪ್ಪ ಮಂತ್ರಿಮಂಡಳಕ್ಕೆ ವಾಟಾಳ ನಾಗರಾಜ್ ಒಬ್ಬರೇ ಸಮ. ನನ್ನ ಶಾಸನಸಭೆ, ವಿಧಾನಪರಿಷತ್‌ಗೆ ಬರದೇ ರೀತಿ ಯಡಿಯೂರಪ್ಪ ಪ್ರಯತ್ನ ಮಾಡಿದ್ದಾರೆ.
ನಾನು ಶಾಸನಸಭೆಗೆ ಬಂದ್ರೆ ಯಡಿಯೂರಪ್ಪನವರ ಚಡ್ಡೀಲಿ ನೀರು ಇಳಿಸ್ತೀನಿ ಎಂಬುದು ಅವರಿಗೂ ಗೊತ್ತು ಎಂದು ಅವರು ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ಸುವರ್ಣಸೌಧದ ಎದುರು ಪ್ರತಿಭಟನೆ
ಸುವರ್ಣವಿಧಾನಸೌಧದಲ್ಲಿ ಅಧಿವೇಶನ ನಡೆಸಲು ಆಗ್ರಹಿಸಿ ವಾಟಾಳ್ ನಾಗರಾಜ್ ತಮ್ಮ ಬೆಂಬಲಿಗರೊಂದಿಗೆ ಸುವರ್ಣವಿಧಾನಸೌಧದ ಎದುರು ರಸ್ತೆಯ ಮೇಲೆಯೇ ಮಲಗಿ ಪ್ರತಿಭಟನೆ ನಡೆಸಿದರು.
ಪೊಲೀಸರ ಕಣ್ಣುತಪ್ಪಿಸಿ ಸರ್ಕಾರಿ ಬಸ್‌ನಲ್ಲಿ ಸುವರ್ಣಸೌಧಕ್ಕೆ ಆಗಮಿಸಿದ ವಾಟಾಳ ನಾಗರಾಜ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸುವರ್ಣವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಸುವಂತೆ ಆಗ್ರಹಿಸಿದರು.

Leave A Reply

Your email address will not be published.