ಡಾ. ಸರಜೂ ಕಾಟ್ಕರ್ ಗೆ ಬಸವರಾಜ ಕಟ್ಟೀಮನಿ ಪತ್ರಕರ್ತ ಪ್ರಶಸ್ತಿ

0 113

ಬೆಳಗಾವಿ: ಪ್ರಸಿದ್ದ ಪತ್ರಕರ್ತ,ಕವಿ ಹಾಗೂ ಲೇಖಕರಾದ ಡಾ.ಸರಜೂ ಕಾಟ್ಕರ್ ಅವರಿಗೆ ಬಸವರಾಜ ಕಟ್ಟೀಮನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸೆಪ್ಟೆಂಬರ 19 ರಂದು ಜರುಗಿದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಬಸವರಾಜ ಕಟ್ಟೀಮನಿ ಪತ್ರಕರ್ತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಡಾ. ಸರಜೂ ಕಾಟ್ಕರ್ ಅವರು ನೇತಾಜಿ ದಿನಪತ್ರಿಕೆ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕೆಲ ವರ್ಷ ಸೇವೆ ಸಲ್ಲಿಸಿ ಆನಂತರದಲ್ಲಿ ಕನ್ನಡಪ್ರಭ, ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಗಳಲ್ಲಿ ಸುದೀರ್ಘ ಕಾಲ ವರದಿಗಾರರಾಗಿ, ಮುಖ್ಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
‘ಸಾಕ್ಷಿ’ ಹೇಳಲಾಗದ ಕಥೆಗಳು, ‘ವೃತ್ತಾಂತ’ ಇವು ಅವರ ಪತ್ರಿಕಾ ಬದುಕಿನ ಅನುಭವ ಆಧರಿಸಿದ ಕೃತಿಗಳು. ಕಾವ್ಯ, ಕಥೆ, ಕಾದಂಬರಿ, ಅನುವಾದ ನಾಟಕ ವಿಮರ್ಶೆ ಕುರಿತು 60ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.
ಬೆಂಡಿಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಿದ ಪ್ರಕರಣ, ಸೇರಿದಂತೆ ಅವರು ಅನೇಕ ಲಂಚ ಪ್ರಕರಣ ಹಾಗೂ ಮುಂತಾದ ಅವರ ವರದಿಗಳು ಸಮಾಜದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿದ್ದವು. ಅವರ ಅಂಕಣ ಬರಹಗಳು, ವಿಶೇಷ ಲೇಖನಗಳು ನಾಡಿನ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.
ಈಗಾಗಲೇ ಇವರು ಕರ್ನಾಟಕ ಮಾಧ್ಯಮ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಪ್ರಶಸ್ತಿ, ಬೆಳಗಾವಿಯ ರಾಜ್ಯಾಧ್ಯಕ್ಷ ಪ್ರಶಸ್ತಿ, ಮುಂಬಯಿಯ ಕರ್ನಾಟಕ ಮಲ್ಲ ಪ್ರಶಸ್ತಿ, ಗೋವೆಯ ಲೋಕ ಶಿಕ್ಷಣ ರಾಷ್ಟ್ರೀಯ ಪ್ರತಿಷ್ಠಾನದ ನಾರಾಯಣ ಅಠವಲೆ ಪತ್ರಿಕಾ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಅವರ 45 ವರ್ಷಗಳ ಸುದೀರ್ಘ ಸೇವೆ ಮತ್ತು ಸಾಧನೆಗಳನ್ನು ಪರಿಗಣಿಸಿ ಪತ್ರಕರ್ತ ಪ್ರಶಸ್ತಿಗೆ ಡಾ. ಸರಜೂ ಕಾಟ್ಕರ್ ಅವರನ್ನು ಸಭೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.