ಕೊರೋನಾಗೆ ಕೇಂದ್ರ ಸಚಿವ ಸುರೇಶ ಅಂಗಡಿ ಬಲಿ

0 143

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ, ಹಿರಿಯ ರಾಜಕಾರಣಿ, ಮುತ್ಸದಿ, ಸುರೇಶ ಅಂಗಡಿ ( ೬೫) ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಅದೃಷ್ಟದ ರಾಜಕಾರಣಿ, ಸರಳ ಸಜ್ಜನ ರಾಜಕಾರಣಿ ಎಂದೇ ಖ್ಯಾತರಾಗಿದ್ದ ಅಂಗಡಿ ಅವರು ಮೂಲತಃ ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದವರು. ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ೧೨ ದಿನಗಳಿಂದ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ರಾಜಕೀಯ ಪ್ರವೇಶಕ್ಕೂ ಮೊದಲೇ ಅವರು ಸಿಮೆಂಟ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸತತವಾಗಿ ನಾಲ್ಕು ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರಿಗೆ ನರೇಂದ್ರ ಮೋದಿ ಸಂಪುಟದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸ್ಥಾನ ಲಭಿಸಿತ್ತು. ಕಾಕತಾಳಿಯ ಎಂಬಂದೇ ಅವರ ಹುಟ್ಟುಹಬ್ಬದಂದೇ ಸಚಿವ ಸ್ಥಾನ ಸಿಕ್ಕಿತ್ತು. ಕೇಂದ್ರ ಸರ್ಕಾರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದ ಸುರೇಶ ಅಂಗಡಿ ಪ್ರಭಾವಿ ನಾಯಕರೂ ಆಗಿದ್ದರು. ರಾಜ್ಯಕ್ಕೆ ಹಲವಾರು ರೈಲ್ವೆ ಯೋಜನೆಗಳು ತಂದಿದ್ದರು. ಇವರ ಕಾರ್ಯವೈಖರಿ ಕೂಡ ಎಲ್ಲರ ಅಚ್ಚುಮೆಚ್ಚಿಗೆ ಕಾರಣವಾಗಿತ್ತು.
ಬೆಳಗಾವಿ- ಕಿತ್ತೂರ- ಧಾರವಾಡ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಕುರಿತು ಸುರೇಶ ಅಂಗಡಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದರು. ಇದಾದ ಬಳಿಕ ಅವರನ್ನು ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿದ್ದರು. ಸಂಸತ್ತಿನಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಅವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಆಗ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಇದನ್ನು ಸ್ವತಃ ಅಂಗಡಿ ಅವರೇ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು. ಅಲ್ಲದೇ, ತಮ್ಮೊಂದಿಗೆ ಸಂಪರ್ಕ ಹೊಂದಿರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆಯೂ ಮನವಿ ಮಾಡಿದ್ದರು.
ಚನ್ನಬಸಪ್ಪ ಮತ್ತು ಸೋಮವ್ವ ದಂಪತಿ ಪುತ್ರನಾಗಿ ೧.೬.೧೯೫೫ರಲ್ಲಿ ಜನಿಸಿದ್ದರು. ಬೆಳಗಾವಿಯ ಎಸ್‌ಎಸ್‌ಎಸ್ ಸಮಿತಿಯ ಮಹಾವಿದ್ಯಾಲಯದಲ್ಲಿ ಬಿಕಾಂ ಪದವಿ, ರಾಜಾ ಲಖಮಗೌಡ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಸಂಘಟಿಸುವಲ್ಲಿ ಶ್ರಮಿಸಿದ್ದರು. ಬಿಜೆಪಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ೨೦೦೪,೨೦೦೯,೨೦೧೪ ಹಾಗೂ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಸತವಾಗಿ ಆಯ್ಕೆಯಾಗಿದ್ದರು.

Leave A Reply

Your email address will not be published.