ಅಂಗಡಿ ಹುಟ್ಟೂರಲ್ಲಿ ನೀರವಮೌನ, ಮುಗಿಲು ಮುಟ್ಟಿದ ತಾಯಿಯ ಆಕ್ರಂದನ

0 87

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ವಿಧಿವಶರಾದ ಹಿನ್ನೆಲೆಯಲ್ಲಿ ಬೆಳಗಾವಿ ಹಾಗೂ ಅವರ ಹುಟ್ಟೂರು ಕೆ.ಕೆ.ಕೊಪ್ಪ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ಅಂಗಡಿ ಅವರ ನಿವಾಸ ಹಾಗೂ ಕೆ.ಕೆ.ಕೊಪ್ಪ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಬಿಜೆಪಿ ಕಾರ್ಯಕರ್ತರು ವಿವಿಧೆಡೆ ಅಗಲಿದ ತಮ್ಮ ನಾಯಕ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಎರಡು ವಾರದ ಹಿಂದಷ್ಟೇ ಅವರು ಕೆ.ಕೆ.ಕೊಪ್ಪ ಗ್ರಾಮಕ್ಕೆ ಭೇಟಿಕೊಟ್ಟಿದ್ದರು. ದೆಹಲಿಗೆ ತೆರಳುವ ಮುನ್ನ ತಾಯಿ ಸೋಮವ್ವ ಭೇಟಿಯಾಗಿ ಹೋಗಿದ್ದರು. ತಾಯಿಯನ್ನು ಭೇಟಿ ಮಾಡಿ ದೆಹಲಿಯ ಅಧಿವೇಶನದಲ್ಲಿ ಪಾಲ್ಗೊಂಡು ಮರಳಿ ಬರುವುದಾಗಿ ಹೇಳಿ ಹೋದ ಅಂಗಡಿ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಪ್ರತಿವಾರಕ್ಕೊಮ್ಮೆ ತಾಯಿ ಸೋಮವ್ವ ಅವರನ್ನು ಭೇಟಿಯಾಗುತ್ತಿದ್ದರು.
ಮುಗಿಲು ಮುಟ್ಟಿದ ತಾಯಿಯ ಆಕ್ರಂದನ
ಕರುಳ ಕುಡಿಯನ್ನು ಕಳೆದುಕೊಂಡ ತಾಯಿ ಸೋಮವ್ವ ಅಂಗಡಿ ಅವರು ಮಗ ಸುರೇಶ ಅಂಗಡಿ ಅವರನ್ನು ನೆನೆಸಿಕೊಂಡು ಕಣ್ಣೀರು ಹಾಕಿದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ದೆಹಲಿಗೆ ಹೋಗುವಾಗ ಬಂದು ಭೇಟಿಯಾಗಿ ಹೋಗಿದ್ದ. ಪಾರ್ಲಿಮೆಂಟ್ ನ್ಯಾಗ್ ರೊಕ್ಕಾ ಇಲ್ಲ. ನಾನು ಹೋಗಬೇಕು ಎಂದಿದ್ದ. ಒಂದು ತಿಂಗಳ ಬಳಿಕ ಬಂದು ಭೇಟಿಯಾಗುತ್ತೇನೆ ಎಂದಿದ್ದ. ಒಂದು ತಿಂಗಳವರೆಗೂ ಹೋಗಬೇಡ ಮಗನೇ ಎಂದಿದ್ದೆ. ಹಳ್ಳಿಯಿಂದ ಬೆಳಗಾವಿಗೆ ಬಂದು ಶಾಲೆ ಕಲಿತು ದೊಡ್ಡ ಮನುಷ್ಯನಾಗಿದ್ದ. ನನ್ನ ಮಾತು ಎಂದಿಗೂ ಮೀರುತ್ತಿರಲಿಲ್ಲ. ನನ್ನ ಮಗ ಸಾಲಿ ಕಟ್ಟಿಸಿದ್ದಾ, ಬಸವಣ್ಣನ ಗುಡಿ ಕಟ್ಟಿಸಿದ್ದ. ನನ್ನ ಮಗ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದ. ಊರಾಗ ಪೈಪ್‌ಲೈನ್ ಮಾಡಿಸಿದ್ದ. ನನ್ನ ಹೆಸರಿನಲ್ಲಿ ಶಾಲೆ ಕಟ್ಟಿಸಿದ್ದ ಎಂದು ತಾಯಿ ಸೋಮವ್ವ ಅಂಗಡಿ ಕಣ್ಣೀರು ಹಾಕಿದರು.
ಕೋರೆ ದಂಪತಿ ಸಾಂತ್ವನ
ಸುರೇಶ ಅಂಗಡಿ ನಿಧನರಾದ ಹಿನ್ನೆಲೆಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮತ್ತು ಆಶಾ ಕೋರೆ ದಂಪತಿ ಬೆಳಗಾವಿ ನಗರದ ವಿಶ್ವೇಶ್ವರಯ್ಯ ನಗರಲ್ಲಿರುವ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಅವರ ತಾಯಿ ಸೋಮವ್ವ ಅಂಗಡಿ ಅವರಿಗೆ ಸಾಂತ್ವನ ಹೇಳಿದರು.
ನಾನೇ ಸಾಂಬ್ರಾಕ್ಕೆ ಬಿಟ್ಟು ಬಂದಿದ್ದೆ
ಸುರೇಶ ಅಂಗಡಿ ಅವರ ಕಾರು ಚಾಲಕನಾಗಿ ನಾನು ೩೦ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಸೆ. ೧೧ರಂದು ನಾನೇ ಅವರನ್ನು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದೆ. ಆದರೆ, ಅವರು ಮರಳಿ ಬರಲೇ ಇಲ್ಲ ಎಂದು ಸುರೇಶ ಅಂಗಡಿ ಅವರ ಕಾರ್ ಚಾಲಕ ಮುದುಕಪ್ಪ ನಾಯಕ ಕಣ್ಣೀರು ಹಾಕಿದರು. ಅವರು ಎಂದಿಗೂ ನನ್ನನ್ನು ಕೆಲಸದವನಂತೆ ಭಾವಿಸಿರಲಿಲ್ಲ. ಅವರ ಅಕಾಲಿಕ ನಿಧನದಿಂದ ತುಂಬಾ ನೋವುಂಟಾಗಿದೆ ಎಂದು ಕಣ್ಣೀರು ಹಾಕಿದರು.

Leave A Reply

Your email address will not be published.