ಬೆಳಗಾವಿ: ರೈತ ವಿರೋಧಿ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ ಅನಿವಾರ್ಯವಾಗಿದೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ವಿರೋಧಿ ಬೀಲ್ ತಂದಿದೆ. ಇದನ್ನು ಖಂಡಿಸುವುದು ರೈತರಿಗೆ ಅನಿವಾರ್ಯ. ಆದ ಕಾರಣ ದೇಶಾದ್ಯಂತ ರೈತರು ಪ್ರತಿಭಟನೆ ಕೈಗೊಂಡಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದರು.
ಕೊರೊನಾದಿಂದ ಮೃತಪಟ್ಟ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಬಗ್ಗೆ ಮಾತನಾಡಿ, ಸುರೇಶ ಅಂಗಡಿ ಅವರು ರಾಜ್ಯ ಹಾಗೂ ಜಿಲ್ಲೆಯಲ್ಲಿ ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಅವರು ಸೌಮ್ಯ ಸ್ವಭಾವ ಉಳ್ಳವರಾಗಿದ್ದರು. ಅವರಿಗೆ ಒಳ್ಳೆಯ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಹೆಚ್ಚು ಕೆಲಸ ಮಾಡಲು ಅವಕಾಶವಾಗಲಿಲ್ಲ.
ನಮ್ಮ ಜಿಲ್ಲೆಗೆ ಅವರು ವಿಶೇಷ ಕೊಡುಗೆ ನೀಡಿದ್ದಾರೆ. ನಾವು ಕೂಡಾ ತುಂಬಾ ನಿರೀಕ್ಷೆ ಮಾಡಿದ್ದೆವು. ಆದರೆ ನಮ್ಮ ಬಿಟ್ಟು ಅಗಲಿದ್ದಾರೆ. ಅವರು ಮಾಡಿದ ಕೆಲಸಗಳೇ ನಮಗೆಲ್ಲ ಆದರ್ಶ ಎಂದು ಹೇಳಿದರು.