ಗಾನ ಗಾರುಡಿಗ ಎಸ್ಪಿ ಬಾಲಸುಬ್ರಹ್ಮಣ್ಯಮ್ ಇನ್ನಿಲ್ಲ

0 102

ಚೆನ್ನೈ :  ಗಾನ ಗಾರುಡಿಗ, ಸುಮಧುರ ಹಾಡುಗಳ ಸರದಾರ, ನಟ, ಸಂಗೀತ ನಿರ್ದೇಶಕ ಎಸ್.ಪಿ.ಬಾಲಸುಬ್ರಹ್ಮಣ್ಯಂ(74) ಅವರು ಅನಾರೋಗ್ಯದಿಂದ  ನಿಧನರಾದರು. 

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ  ಫಲಕಾರಿಯಾಗದೇ ಕೊನೆಯುಸಿರೆಳೆದರು. ಕಳೆದ ಎರಡು ತಿಂಗಳ ಹಿಂದೆ ಕೊರೋನಾ ಪಾಸಿಟಿವ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿ ಚೇತರಿಸಿಕೊಂಡಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ ಚೆನ್ನೈನ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಕೃತಕ ಉಸಿರಾಟ ಸೇರಿದಂತೆ ಅಗತ್ಯದ ಎಲ್ಲಾ ವೈದ್ಯಕೀಯ ಸೇವೆಗಳನು ಒದಗಿಸಿ ಅವರನ್ನು ಬದುಕಿಸಲು ಹರಸಾಹಸ ಪಟ್ಟಿದ್ದರು.

ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಎಸ್.ಪಿ.ಬಿ. ಅವರಿಗೆ ಆಗಸ್ಟ್ ಮೊದಲ ವಾರದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿತ್ತು.

ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿ ಜನಿಸಿದ ಇವರ ಸಂಗೀತಾಸಕ್ತಿಯೇ ಇವರ ತಂದೆ ಎಸ್.ಪಿ.ಸಾಂಬಮೂರ್ತಿಯವರೇ ಪ್ರೇರಣೆ. ತಂದೆ ಪಂಡಿತ ಸಾಂಬಶಿವನ್ ಹರಿಕಥಾ ವಿದ್ವಾಂಸರು. ಮದರಾಸಿನಲ್ಲಿ ವಿದ್ಯಾಭ್ಯಾಸ ಮಾಡಿ ಎಂಜನಿಯರಿಂಗ್ ಪದವಿಗಳಿಸಿದರು.

ವಿದ್ಯಾರ್ಥಿಯಾಗಿದ್ದಾಗಲೇ ತಾವೇ ಗೀತೆಯೊಂದನ್ನು ರಚಿಸಿ ಹಾಡಿ ತೀರ್ಪುಗಾರರಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಘಂಟಸಾಲ ಅವರಿಂದ ಮೆಚ್ಚುಗೆ ಪಡೆದರು. ತಮ್ಮಷ್ಟಕ್ಕೆ ತಾವೇ ಹಾಡುವುದು, ಸಂಗೀತದ ಸಲಕರಣೆಗಳನ್ನು ನುಡಿಸುವುದನ್ನೇ ಹವ್ಯಾಸ ವಾಗಿಟ್ಟು ಕೊಂಡಿದ್ದರು.

ಶ್ರೀ ಶ್ರೀ ಮರ್ಯಾದ ರಾಮಣ್ಣ (1966) ತೆಲುಗು ಚಿತ್ರಕ್ಕಾಗಿ ಹಾಡುವ ಮೂಲಕ ಚಿತ್ರರಂಗಕ್ಕೆ ಪರಿಚಯಗೊಂಡ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರದು ಹಿನ್ನೆಲೆಗಾಯನ ಕ್ಷೇತ್ರದಲ್ಲಿ ಅತಿ ದೊಡ್ಡ ಹೆಸರು ಗಳಿಸಿದರು.ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ.ಎಂ.ಸೌಂದರ್ ರಾಜನ್, ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ ಸಾರ್ವಭೌಮರಾಗಿದ್ದ ಸಂದರ್ಭದಲ್ಲಿ ಸಂಗೀತ ಲೋಕಕ್ಕೆ ಅಡಿಯಿರಿಸಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಾನಾ ಭಾಷೆಗಳಲ್ಲಿ ನಾಲ್ಕು ಸಹಸ್ರಕ್ಕೂ ಹೆಚ್ಚಿನ ಗೀತೆಗಳನ್ನು ಹಾಡುವ ಮೂಲಕ ಹೊಸ ದಾಖಲೆಯನ್ನೇ ಬರೆದರು.

# ದಾಖಲೆಗಳ ಸರದಾರ:
ಎಸ್ಪಿಬಿ ಚಿತ್ರ ಗೀತೆಗಳನ್ನೂ ಮಾತ್ರವಲ್ಲ ಸಿನಿಮಾ ಹಾಡುಗಳ ಜೊತೆ ಜೊತೆಗೆ ದೇವರ ನಾಮ, ಆಲ್ಬಂ ಹಾಡುಗಳು, ಭಾವ ಗೀತೆ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಗೀತೆಗಳನ್ನ ಹಾಡಿದ್ದಾರೆ. ಎಸ್‍ಪಿಬಿ ತಮ್ಮ ಕಂಠಸಿರಿ; ಸಂಗೀತದ ಮೇಲಿನ ಅಕ್ಕರೆ, ಪ್ರೀತಿ, ಬದ್ಧತೆ, ಸರಳ ಜೀವನದಿಂದಾಗಿಯೇ ಎಲ್ಲರ ಮಾನಸಗುರುವಾದರು.

ಅಷ್ಟೇ ಅಲ್ಲ; ಸಂಗೀತ ಕ್ಷೇತ್ರದಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಲೇ ಹೋದರು. ಬಾಲಸುಬ್ರಹ್ಮಣಂ ಅವರ ಕಂಠ ಸಿರಿಗೆ ಮಾರುಹೋದ ಸಂಗೀತ ಪ್ರಿಯರು ಅವರ ಹಾಡಿಗಾಗಿ ಹಾತೊರೆಯುತ್ತಿದ್ದರು.
ಒಮ್ಮೆ ಎಸ್‍ಪಿಬಿ ಅವರು ತಮಿಳು, ತೆಲುಗು ಭಾಷೆಯಲ್ಲಿ ಒಂದೇ ದಿನದಲ್ಲಿ 19 ಗೀತೆಗಳನ್ನು ಹಾಡಿದ್ದರು, ಕನ್ನಡದಲ್ಲಿ ಒಂದೇ ದಿನ 17 ಗೀತೆಗಳನ್ನು ಹಾಡಿದ್ದರೆ, ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿಮುದ್ರಿಸಿದ್ದರು. ಇದು ಎಸ್‍ಪಿಬಿ ಅವರಿಗಿದ್ದ ಸಂಗೀತದ ಶಕ್ತಿ. ಎಂ.ಆರ್.ವಿಠಲ್ ನಿರ್ದೇಶಿದ ನಕ್ಕರೆ ಅದೇ ಸ್ವರ್ಗ(1967) ಚಿತ್ರದಲ್ಲಿ ಅಳವಡಿಸಿರುವ ಕನಸಿದೋ ನನಸಿದೋ ಗೀತೆಯನ್ನು ನಟ ಅರುಣಕುಮಾರ್ ಅವರಿಗಾಗಿ ಹಾಡುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್ಪಿ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತವನ್ನೂ ಸಂಯೋಜಿಸಿದ್ದಾರೆ.

ಪ್ರಶಸ್ತಿಗಳ ಸುರಿಮಳೆ:
ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇಷ್ಟೇ ಅಲ್ಲದೆ ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.

ಇನ್ನು, ಉತ್ತಮ ಹಿನ್ನೆಲೆ ಗಾಯನಕ್ಕಾಗಿ 6 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಬಾಲಿವುಡ್ ಫಿಲ್ಮ್ ಫೇರ್ ಪ್ರಶಸ್ತಿ ಮತ್ತು 6 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ (ಸೌತ್) ಪಡೆಯನ್ನು ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ, 2001ರಲ್ಲಿ ಪದ್ಮ ಶ್ರೀ ಮತ್ತು 2011ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ. ಬಹುತೇಕ ನಟರಿಗೆ ಧ್ವನಿಯಾಗಿದ್ದ ಎಸ್ಪಿಬಿ ಅವರಿಗೆ ಕರುನಾಡಿನ ಕಾಲಪರ್ವತ ಡಾ. ರಾಜ್ ಕುಮಾರ್ ಅವರು ಧ್ವನಿಯಾಗಿದ್ದರು ಎನ್ನುವುದು ಮತ್ತೊಂದು ವಿಶೇಷ. ಎಸ್ಪಿಬಿ ಅವರು ಗಾಯಕ, ನಟ , ಸಂಗೀತ ನಿರ್ದೇಶಕ ಅಷ್ಟೇ ಅಲ್ಲ ನಿರೂಪಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಸ್ವರಾಭಿಷೇಕಂ ಮತ್ತು ಕನ್ನಡದಲ್ಲಿ ಎದೆತುಂಬಿ ಹಾಡುವೆನು ಎಂಬ ಎರಡೂ ಅದ್ಭುತ ಕಾರ್ಯಕಮಗಳನ್ನು ಸಂಗೀತ ಪ್ರಿಯರಿಗೆ ನೀಡಿದವರು. ಅಭಿನಯ ಇವರ ಮತ್ತೊಂದು ಪ್ರವೃತ್ತಿ. ತಮಿಳಿನ ಕೇಳಡಿ ಕಣ್ಮಣಿ ಚಿತ್ರದಿಂದ ಆರಂಭಿಸಿ ಅನೇಕ ಚಲನಚಿತ್ರಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬಾಳೊಂದು ಚದುರಂಗ, ಕಲ್ಯಾಣೋತ್ಸವ, ಮುದ್ದಿನಮಾವ, ಮಾಂಗಲ್ಯಂ ತಂತುನಾನೇನ, ಭಾರತ 2000 ಇವರು ಅಭಿನಯಿಸಿದ್ದರು.

Leave A Reply

Your email address will not be published.