ತೇವಾಂಶದಿಂದ ಬೆಳೆ ಕುಂಠಿತ: ಕೀಟಬಾಧೆ ನಿಯಂತ್ರಣಕ್ಕೆ ಸಲಹೆ

0 41

ಬೆಳಗಾವಿ: ಜಿಲ್ಲೆಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು, ಇದರಿಂದ ಸವದತ್ತಿ ತಾಲೂಕಿನ ಸವದತ್ತಿ, ಹೂಲಿ ಮತ್ತು ಕರೀಕಟ್ಟಿ ಗ್ರಾಮಗಳ ಕೃಷಿ ಜಮೀನಿನಲ್ಲಿ ನೀರು ಬಸಿದು ಹೋಗದೆ ಇರುವುದರಿಂದ ಗೋವಿನ ಜೋಳ, ಸಜ್ಜೆ, ಹತ್ತಿ, ಸೂರ್ಯಕಾಂತಿ, ಶೇಂಗಾ ಹಾಗೂ ಇತರ ಬೆಳೆಗೆ ತೇವಾಂಶ ಹೆಚ್ಚಳದಿಂದ ಬೆಳೆಗಳು ಕುಂಠಿತವಾಗುವ ಸಂಭವವಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.

ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿರುವ ಅವರು, ತೇವಾಂಶದಿಂದ ಬೆಳೆ ಕುಂಠಿತಗೊಳ್ಳುತ್ತಿರುವುದರಿಂದ ರೈತರು ನೀರನ್ನು ಹೊರಹಾಕಲು ಕಾಲುವೆ ಮಾಡಿ ನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ವಾತಾವರಣದಲ್ಲಿ ಹೆಚ್ಚಿನ ತೇವಾಂಶವಿರುವದರಿಂದ ಸದರಿ ಬೆಳೆಗಳಲ್ಲಿ ಕೀಟ ರೋಗ ಬಾಧೆ ಕಂಡು ಬರುವ ಸಂಭವವಿದೆ. ಕಾರಣ, ರೋಗ/ಕೀಟ ಬಾಧೆಗೆ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ನೀರು ನಿಲ್ಲುವದರಿಂದ ಬೆಳೆಗಳ ಬಣ್ಣ ಹಳದಿ/ಬಿಳಿಯಾಗಿ ಕಂಡುಬಂದಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರಗಳಾದ ಮೊನೊ ಅಮೋನಿಯಂ ಪಾಸ್ಟೇಟ್ (೧೨:೬೧:೦ ಸಾ:ರಂ:ಪೊ) ಹಾಗೂ ಪೊಟ್ಯಾಸಿಂ ನೈಟ್ರೇಟ್ (೧೩:೦೦:೪೫ ಸಾ:ರಂ:ಪೊ) ರಸಗೊಬ್ಬರಗಳನ್ನು ೫ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿರಿ ಅಥವಾ (೧೯:೧೯:೧೯ ಸಾ:ರಂ:ಪೊ) ನೀರಿನಲ್ಲಿ ಕರಗುವ ರಸಗೊಬ್ಬರ ೧೦ ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ಸಲಹೆ ನೀಡಿದ್ದಾರೆ.

ಹತ್ತಿ ಬೆಳೆಯು ನೀರು ನಿಂತು ಹಳದಿ/ಬಿಳಿ ಆಗಿದ್ದರೆ (೦:೫೨:೩೪ ಸಾ:ರಂ:ಪೊ) ನೀರಿನಲ್ಲಿ ಕರಗುವ ರಸಗೊಬ್ಬರ ೧೫೦ ಗ್ರಾಂ + ೫೦ ಗ್ರಾಂ ಯೂರಿಯಾ ಹಾಗೂ ರೋಗ ನಿರ್ವಹಣೆಗೆ ಹೆಕ್ಸಾಕೊನಜೋಲ ೧೬ ಮೀ.ಲೀ. ಪ್ರತಿ ಟ್ಯಾಂಕಿಗೆ (೧೬ ಲೀಟರ) ನೀರಿಗೆ ಬೆರಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಸಲಹೆ ಪಡೆಯಬೇಕು ಎಂದು ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave A Reply

Your email address will not be published.