ಉದ್ಘಾಟನೆಗೆ ಸಜ್ಜುಗೊಂಡ ಬೆಳಗಾವಿ ಕಾಂಗ್ರೆಸ್ ಭವನ

0 40

ಬೆಳಗಾವಿ: ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ತನ್ನ ಚಿಂತನೆ, ಜೀವನ ಸಂದೇಶಗಳಿಂದ ಜಗತ್ತಿನುದ್ದಕ್ಕೂ ವ್ಯಾಪಿಸಿ ನಿಂತ ಮಹಾನ್ ಚೇತನ. ಮಹಾತ್ಮಾ ಗಾಂಧೀಜಿ ಅವರ ಜೊತೆಗೆ ಬೆಳಗಾವಿಗೆ ಚಾರಿತ್ರಿಕ ನಂಟಿದೆ. ಬೆಳಗಾವಿ ಜಿಲ್ಲೆಯ ಜೊತೆಗೆ ಅವರ ಒಟನಾಟವಿತ್ತು. ಗಾಂಧೀಜಿ ಅವರು ತಮ್ಮ ಜೀವನದಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಾತ್ರ ಅಧ್ಯಕ್ಷತೆ ವಹಿಸಿಕೊಂಡಿದ್ದು ವಿಶೇಷ. ೧೯೨೪ ರಂದು ಡಿಸೆಂಬರ ೨೬,೨೭ ರಂದು ಕಾಂಗ್ರೆಸ್ ೩೯ನೇ ಅಧಿವೇಶನ ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ನಡೆದಿತ್ತು. ಆದರೆ, ಗಾಂಧೀಜಿ ಭೂಸ್ಪರ್ಶ ಮಾಡಿದ್ದ ಬೆಳಗಾವಿಯ ಪುಣ್ಯ ಭೂಮಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಕಟ್ಟಡವೇ ಇರಲಿಲ್ಲ. ಕಾಂಗ್ರೆಸ್ ಭವನ ಎನ್ನುವುದು ಕನಸಿನ ಮಾತಾಗಿತ್ತು. ಕಾಂಗ್ರೆಸ್ ಭವನದ ಕನಸನ್ನು ಸಾಕಾರಗೊಳಿಸಿದ ಕೀರ್ತಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಯಮಕನಮರಡಿ ವಿಧಾನಸಭೆ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಜಿಲ್ಲೆಯ ಪಕ್ಷದ ಮುಖಂಡರ ಸಹಕಾರ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದ ಇದೀಗ ಐತಿಹಾಸಿಕ ನೆಲ ಬೆಳಗಾವಿಯಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಮೀಟಿಯ ಕಾಂಗ್ರೆಸ್ ಭವನದ ಕಟ್ಟಡ ತಲೆ ಎತ್ತಿ ನಿಂತಿದೆ.
ಶ್ವೇತ ವರ್ಣದ ಕಾಂಗ್ರೆಸ್ ಭವನ ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ. ವಿಶೇಷವಾಗಿ ಗಾಂಧೀಜಿಯವರ ಜಯಂತಿ ದಿನವಾದ ಅಕ್ಟೋಬರ್ ೨ ರಂದು ಸಂಜೆ ೪ ಗಂಟೆಗೆ ಈ ಕಾಂಗ್ರೆಸ್ ಭವನದ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಟ್ಟಡವನ್ನು ಉದ್ಘಾಟಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ ಸೇರಿದಂತೆ ಪಕ್ಷದ ಮುಖಂಡರು, ಕಾಂಗ್ರೆಸ್ ಶಾಸಕರು ಹಾಗೂ ಪ್ರಮುಖ ಕಾರ್ಯಕರ್ತರು ಪಾಲ್ಗೊಳ್ಳುವರು. ಕೋವಿಡ್‌೧೯ ಹಿನ್ನೆಲೆಯಲ್ಲಿ ಆಯ್ದ ಕಾರ್ಯಕರ್ತರು ಮಾತ್ರ ಪಾಲ್ಗೊಳ್ಳುವರು.

ಕಾಂಗ್ರೆಸ್ ಭವನದ ಪೀಠಿಕೆ
ಬೆಳಗಾವಿಯ ಐತಿಹಾಸಿಕ ನೆಲದಲ್ಲಿ ಕಾಂಗ್ರೆಸ್ ಕಚೇರಿಯ ಭವನ ಇಲ್ಲದಿರುವುದರಿಂದ ಈ ಭಾಗದಲ್ಲಿ ಸ್ವಂತ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಿಸಬೇಕು ಎನ್ನುವ ಕುರಿತು ೨೦೧೪ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ನ ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರು ಗಂಭೀರ ಚಿಂತನೆ ನಡೆಸಿ, ಚರ್ಚೆಯನ್ನು ನಡೆಸಿದ್ದರು. ಅಂದಿನ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಕ್ಷದ ಹಿರಿಯ ಮುಖಂಡರ ಜೊತೆಗೆ ಚರ್ಚೆ ನಡೆಸಿ, ಕಾಂಗ್ರೆಸ್ ಕಚೇರಿ ಭವನಕ್ಕೆ ನಿವೇಶನ ಕೋರಿ ಬೆಳಗಾವಿ ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿ, ನಿವೇಶನ ಪಡೆಯುವಲ್ಲಿ ಯಶಸ್ವಿಯಾದರು. ಬೆಳಗಾವಿಯ ಹೃದಯ ಭಾಗದಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯೇ ಜಾಗೆ ದೊರೆಯಿತು. ಈ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣಕ್ಕೆ ಪಕ್ಷದ ನಾಯಕರಾದ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ದಿನೇಶ ಗುಂಡೂರಾವ್, ಬಿ.ಕೆ. ಹರಿಪ್ರಸಾದ, ಎಸ್.ಆರ್.ಪಾಟೀಲ, ಎಚ್.ಕೆ. ಪಾಟೀಲ ಮೊದಲಾದ ಹಿರಿಯ ಮುಖಂಡರು ಒಪ್ಪಿಗೆಯನ್ನೂ ಸೂಚಿಸಿದರು.
೨೦೧೫ರಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ ಸೇರಿದಂತೆ ಮೊದಲಾದ ಮುಖಂಡರು ಈ ಕಟ್ಟಡ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು. ಕಟ್ಟಡ ಕಾಮಗಾರಿಯೂ ಪ್ರಾರಂಭವೂ ಆಯಿತು. ನೆಲಮಹಡಿ ಹಾಗೂ ಮೊದಲ ಮಹಡಿವರೆಗೆ ಸ್ಲಾಬ್ ಕಾಮಗಾರಿಯೂ ನಡೆದಿತ್ತು. ಆರ್ಥಿಕ ಸಂಕಷ್ಟದಿಂದ ಈ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಈ ಕಟ್ಟಡದಲ್ಲೇ ಕಚೇರಿ ಆರಂಭವಾಯಿತು.
ಆರ್ಥಿಕ ಸಂಕಷ್ಟದಿಂದ ಅರ್ಧಕ್ಕೆ ಸ್ಥಗಿತಗೊಂಡಿರುವ ಕಾಂಗ್ರೆಸ್ ಭವನದ ಕಟ್ಟಡವನ್ನು ಗಮನಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು, ರಾಜ್ಯದಲ್ಲೇ ಈ ಕಟ್ಟಡವನ್ನು ಮಾದರಿ ಕಟ್ಟವನ್ನಾಗಿ ನಿರ್ಮಿಸುವ ಸದುದ್ದೇಶದಿಂದ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದರು. ಕೇವಲ ಆರು ತಿಂಗಳ ಅವಧಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಈ ಕಟ್ಟಡಕ್ಕೆ ಶ್ವೇತ ಭವನದ ಸ್ಪರ್ಶವನ್ನೂ ನೀಡಲಾಯಿತು.

ಜಿಲ್ಲೆಯ ರಾಜಕಾರಣಿಗಳ ಕೊಡುಗೆ
ಕಾಂಗ್ರೆಸ್ ಭವನದ ಭವ್ಯ ಕಟ್ಟಡ ನಿರ್ಮಾಣವಾಗುವುದರ ಹಿಂದೆ ಅಂದಿನ ಕಾಂಗ್ರೆಸ್ ಮುಖಂಡ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ, ವೀರಕುಮಾರ ಪಾಟೀಲ, ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿ, ಕಾಕಾಸಾಹೇಬ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಸಂಗನಗೌಡ ದ್ಯಾಮನಗೌಡ, ಶಿವಾನಂದ ಡೋಣಿ, ದಿ.ಶಂಕರ ಮುನವಳ್ಳಿ ಮೊದಲಾದವರ ಕೊಡುಗೆಯನ್ನು ಮರೆಯುವಂತಿಲ್ಲ. ಅರ್ಧಕ್ಕೆ ಸ್ಥಗಿತಗೊಂಡಿದ್ದ ಕಾಂಗ್ರೆಸ್ ಭವನದ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ವಿಶೇಷ ಕಾಳಜಿ, ಪರಿಶ್ರಮ ಮೀಗಿಲಾದದ್ದು. ಸತೀಶ ಜಾರಕಿಹೊಳಿ ಅವರೇ ಪ್ರತಿನಿತ್ಯ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು. ಇದರ ಪರಿಣಾಮ ನಗರದ ಹೃದಯ ಭಾಗದಲ್ಲಿ ಭವ್ಯವಾದ ಶ್ವೇತ ವರ್ಣದ ಕಾಂಗ್ರೆಸ್ ಭವನದ ಕಟ್ಟಡ ತಲೆ ಎತ್ತಿ, ಕೈ ಬೀಸಿ ಕರೆಯುತ್ತಿದೆ.
ಕಾಂಗ್ರೆಸ್ ಭವನದಲ್ಲಿ ಏನುಂಟು?
೧೨ ಸಾವಿರ ಚದರ ಅಡಿ ವಿಸ್ತೀರಣದಲ್ಲಿ ಕಾಂಗ್ರೆಸ್ ಭವನದ ಅತ್ಯಾಧುನಿಕ ಸುಸಜ್ಜಿತ ಭವ್ಯವಾದ ಕಟ್ಟಡ ತಲೆ ಎತ್ತಿದೆ. ನೆಲಮಹಡಿ ಹಾಗೂ ಮೊದಲ ಮಹಡಿಯನ್ನು ಹೊಂದಿದೆ. ನೆಲಮಹಡಿಯಲ್ಲಿ ಭವ್ಯವಾದ ಸಭಾಭವನವಿದೆ. ಇಲ್ಲಿ ಸುಮಾರು ೪೦೦ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಅಧ್ಯಕ್ಷರ ಕೊಠಡಿಯಿದೆ. ಅಧ್ಯಕ್ಷರ ಆಪ್ತ ಸಹಾಯಕರ ಕೊಠಡಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೊಠಡಿ ಹಾಗೂ ಕಚೇರಿ ಸಿಬ್ಬಂದಿ ಕೊಠಡಿಗಳಿವೆ. ಇನ್ನು ಮೊದಲ ಮಹಡಿಗಳಲ್ಲಿ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರಿಗೆ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲು ತರಬೇತಿ ಕೇಂದ್ರವೊಂದನ್ನು ತೆರೆಯಲಾಗಿದ್ದು, ಇಲ್ಲಿ ೫೦ ಜನರಿಗೆ ತರಬೇತಿ ನೀಡಲು ಸುಸಜ್ಜಿತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರ ಜೊತೆಗೆ ಗಣ್ಯಾತಿಗಣ್ಯರಿಗಾಗಿ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಕಾಂಗ್ರೆಸ್ ಭವನದ ಬಲಬಾಗದಲ್ಲಿ ಕ್ಯಾಂಟೇನ್‌ನ್ನು ತೆರೆಯಲಾಗಿದ್ದು, ಇಲ್ಲಿಗೆ ಆಗಮಿಸುವ ಜನರಿಗೆ ಕಡಿಮೆ ವೆಚ್ಚದಲ್ಲಿ ಉಪಹಾರ ಲಭ್ಯವಾಗಲಿದೆ. ಕಾಂಗ್ರೆಸ್ ಭವನದ ಈ ಕಟ್ಟಡ ಶ್ವೇತಭವನದ ವಿನ್ಯಾಸದ ಮಾದರಿ ಹೊಂದಿರುವುದು ವಿಶೇಷ.

ಕೋಟ್…..
ಬೆಳಗಾವಿಯಲ್ಲಿ ಕಾಂಗ್ರೆಸ್ ಭವನದ ಭವ್ಯ ಕಟ್ಟಡದ ನಿರ್ಮಾಣ ಮಾಡುವ ೫-೬ ವರ್ಷಗಳ ಕನಸು ಇದೀಗ ನನಸಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಇಲ್ಲಿ ಜಮೀನು ಖರೀದಿಸುವ ಪ್ರಯತ್ನ ನಡೆಯಿತು. ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ ಅವರು ಮುತುವರ್ಜಿ ವಹಿಸಿದರು. ಬಳಿಕ ಅಂದಿನ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಕಮೀಟಿ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಪಕ್ಷದ ಹಿರಿಯ ಧುರೀಣರ ಸಹಕಾರದಿಂದ ಕಾಂಗ್ರೆಸ್ ಭವನದ ಕಟ್ಟಡ ಒಂದು ಹಂತಕ್ಕೆ ಬಂದಿತ್ತು. ಬೇರೆ ಬೇರೆ ಕಾರಣಗಳಿಂದ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ನಮಗೆ ಕಾಂಗ್ರೆಸ್ ಭವನದ ಅವಶ್ಯಕತೆ ಇತ್ತು. ನೆಲಮಹಡಿ ಮತ್ತು ಮೊದಲ ಮಹಡಿಗಳ ಕಟ್ಟಡ ಪೂರ್ಣಗೊಳಿಸಲಾಗಿದ್ದು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬೆಂಗಳೂರಿನ ನಂತರ ಅತ್ಯಂತ ಸುಂದರ ಕಾಂಗ್ರೆಸ್ ಭವನದ ಕಟ್ಟಡ ಬೆಳಗಾವಿಯದ್ದು. ಇದು ಬೆಳಗಾವಿಯ ಹೆಮ್ಮೆ. ಅಲ್ಲದೇ, ಕಾರ್ಯಕರ್ತರು ಸೇರಿದಂತೆ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಕಾಂಗ್ರೆಸ್ ಭವನ ಕ್ಯಾಂಟೀನ್ ಆರಂಭಿಸಲಾಗಿದೆ. ಇಲ್ಲಿ ಅತ್ಯಂತ ಕಡಿಮೆ ದರದಲ್ಲಿ ಊಟ, ಉಪಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ.
ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮೀಟಿ
——

ಬೆಳಗಾವಿ ಐತಿಹಾಸಿಕ ನೆಲ. ಇದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ನಡೆದಾಡಿದ ಪುಣ್ಯಭೂಮಿ. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು. ಇಲ್ಲಿ ಕಾಂಗ್ರೆಸ್ ಭವನ ನಿರ್ಮಿಸಬೇಕೆಂಬ ಈ ಭಾಗದ ಪಕ್ಷದ ಕಾರ್ಯಕರ್ತರ ಬೇಡಿಕೆ ಕೊನೆಗೂ ಈಡೇರುತ್ತಿರುವುದು ಹೆಮ್ಮೆಯ ಸಂಗತಿ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಕಾಂಗ್ರೆಸ್ ಭವನದ ಕಟ್ಟಡಕ್ಕೆ ನಿವೇಶನ ಮಂಜೂರಾಯಿತು. ಈಗ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡು ನಾಡಿಗೆ ಸಮರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಡಿ.ಕೆ.ಶಿವಕುಮಾರ ಸೇರಿದಂತೆ ಪಕ್ಷದ ಮುಖಂಡರ ಸಹಕಾರದೊಂದಿಗೆ ಕಾಂಗ್ರೆಸ್ ಭವನ ನಿರ್ಮಿಸಲು ಸಾಧ್ಯವಾಗಿದೆ. ಅದರಲ್ಲಿಯೂ ಸತೀಶ ಜಾರಕಿಹೊಳಿ ಅವರು ಕಟ್ಟಡ ಪೂರ್ಣಗೊಳ್ಳಲು ಮುತುವರ್ಜಿ ವಹಿಸಿದ್ದಾರೆ. ಬೆಳಗಾವಿ ನಗರದ ಹೃದಯಭಾಗದಲ್ಲಿ ಭವ್ಯವಾದ ಶ್ವೇತ ವರ್ಣದ ಕಾಂಗ್ರೆಸ್ ಭವನದ ಕಟ್ಟಡ ತಲೆ ಎತ್ತಿದೆ. ಪಕ್ಷದ ಎಲ್ಲ ಕಾರ್ಯಚಟುವಟಿಕೆಗಳಿಗೆ ಈ ಕಟ್ಟಡ ಶಕ್ತಿ ಕೇಂದ್ರವಾಗಲಿದೆ. ಇಲ್ಲಿ ಕ್ಯಾಂಟೀನ್ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ.
ಲಕ್ಷ್ಮೀ ಹೆಬ್ಬಾಳಕರ, ಶಾಸಕರು, ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರ

——

ಕಾಂಗ್ರೆಸ್ ಭವನ ಈ ಭಾಗದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಬಹುದಿನಗಳ ಬೇಡಿಕೆ ಈಡೇರಿದೆ. ಅಂದಿನ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ, ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಮುಂದಾಳತ್ವದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲು ತೀರ್ಮಾನಿಸಲಾಯಿತು. ಅದರಂತೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ, ವಿನಕುಮಾರ ಸೊರಕೆ ಸೇರಿದಂತೆ ಮೊದಲಾದವರ ಸಹಕಾರದೊಂದಿಗೆ ಈ ಕಟ್ಟಡ ನಿರ್ಮಿಸಲು ಸಾಧ್ಯವಾಯಿತು. ಅರ್ಧಕ್ಕೆ ಸ್ಥಗಿತಗೊಂಡಿದ್ದ ಈ ಕಾಂಗ್ರೆಸ್ ಭವನದ ಕಟ್ಟಡ ಪೂರ್ಣಗೊಳಿಸಲು ಬಹಳಷ್ಟು ಮುತುವರ್ಜಿ ವಹಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸ್ವತಃ ತಾವೇ ಮುಂದೆ ನಿಂತು ೬ ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಶ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಎಲ್ಲ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ವಿನಯ ನಾವಲಗಟ್ಟಿ, ಅಧ್ಯಕ್ಷರು, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಮೀಟಿ

Leave A Reply

Your email address will not be published.