ಸ್ಮಶಾನ ಭೂಮಿ ಕೊರತೆ; ಗ್ರಾಮಗಳ ಪಟ್ಟಿ ಸಿದ್ಧ: ಜಿಲ್ಲಾಧಿಕಾರಿ ಹಿರೇಮಠ

ಪರಿಶಿಷ್ಟ ಜಾತಿ/ಪಂಗಡಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ

0 142

ಬೆಳಗಾವಿ: ಪ್ರವಾಹ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ದಲಿತರಿಗೆ ಸ್ಮಶಾನ ಭೂಮಿ ಒದಗಿಸುವ ಪ್ರಕ್ರಿಯೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಇದೀಗ ಜಿಲ್ಲೆಯಲ್ಲಿ ಒಟ್ಟಾರೆ ಸ್ಮಶಾನ ಭೂಮಿ ಇಲ್ಲದಿರುವ ಗ್ರಾಮಗಳ ಪಟ್ಟಿ ಮಾಡಲಾಗಿದ್ದು, ಸರ್ಕಾರದ ಭೂಮಿ ಲಭ್ಯತೆ ಆಧರಿಸಿ ಆದ್ಯತೆಯ ಮೇರೆಗೆ ದಲಿತರಿಗೆ ಸ್ಮಶಾನ ಭೂಮಿ ಒದಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ  ನಡೆದ ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಲಿತರಿಗೆ ಸ್ಮಶಾನ ಭೂಮಿ ಒದಗಿಸುವುದಕ್ಕೆ ಸಂಬಂಧಿಸಿದಂತೆ ಮುಂದಿನ ಸಭೆಯ ವೇಳೆಗೆ ಈ ವಿಷಯದ ಬಗ್ಗೆ ಆಕ್ಷೇಪ ಬರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪರಿಶಿಷ್ಟ ಜಾತಿ ಮತ್ತುಪಂಗಡದ ಜನರು ಸೇರಿದಂತೆ ಎಲ್ಲ ಬಗೆಯ ಸಾಲಸೌಲಭ್ಯ ವಿತರಣೆಯಲ್ಲಿ ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ.
ಅಕ್ರಮ-ಸಕ್ರಮ ಯೋಜನೆಯಡಿ ಅನೇಕ ಜನರು ಸಲ್ಲಿಸಿರುವ ಅರ್ಜಿಗಳ ತ್ವರಿತ ವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯ ಮೂರೂ ಉಪ ವಿಭಾಗಾಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನ್ಯಾಯಾಲಯಗಳಲ್ಲಿ ಬಾಕಿ ಇರುವ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿಗೆ ಮುತುವರ್ಜಿ ವಹಿಸಬೇಕು ಹಾಗೂ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ಧನ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಸರ್ಕಾರಿ ಅಭಿಯೋಜಕರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಿರೇಮಠ ನಿರ್ದೇಶನ ನೀಡಿದರು.
ಆರಂಭದಲ್ಲಿ ಮಾತನಾಡಿದ ಸಮಿತಿಯ ಸದಸ್ಯ ಅಶೋಕ ಅಸೋದೆ, ಪ್ರತಿ ಸಭೆಯಲ್ಲಿ ಸ್ಮಶಾನ ಭೂಮಿಯ ಬಗ್ಗೆ ಚರ್ಚೆ ಆದಾಗ್ಯೂ ಯಾವುದೇ ಪ್ರಗತಿ ಕಂಡುಬರುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ ಅವರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಂದೇ ದಿನಕ್ಕೆ ಹತ್ತರಿಂದ ಹದಿನೈದು ಪ್ರಕರಣಗಳ ಸಾಕ್ಷಿದಾರರನ್ನು ಕರೆಯಿಸುತ್ತಿರುವುದರಿಂದ ಪ್ರಕರಣಗಳ ಬಗ್ಗೆ ಅಗತ್ಯ ಗಮನಹರಿಸುವುದು ಸಾಧ್ಯವಾಗುತ್ತಿಲ್ಲ. ಅದೇ ರೀತಿ ಸಾಕ್ಷಿಗಳ ಹಾಜರಾತಿ ಪತ್ರ ಕೂಡ ಸಮರ್ಪಕವಾಗಿ ಲಭಿಸುತ್ತಿಲ್ಲ ಎಂದು ಸಮಿತಿಯ ಸದಸ್ಯ ಅಶೋಕ ಅಸೋದೆ ಬೇಸರ ವ್ಯಕ್ತಪಡಿಸಿದರು. ದೌರ್ಜನ್ಯ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರಿ ಅಭಿಯೋಜಕರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಐದು ಪ್ರಕರಣಗಳ ಸಾಕ್ಷಿದಾರರನ್ನು ಕರೆಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚನೆ ನೀಡಿದರು.
ಸಾಕ್ಷಿದಾರರು ಬಂದ ತಕ್ಷಣವೇ ಪ್ರತಿತೊಬ್ಬರಿಗೂ ಆರಂಭದಲ್ಲೇ ಹಾಜರಾತಿ ಪತ್ರ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸರ್ಕಾರಿ ಅಭಿಯೋಜಕರಿಗೆ ತಿಳಿಸಿದರು.
ಸಮಿತಿಯ ಸದಸ್ಯ ವಿಜಯ್ ತಳವಾರ ಮಾತನಾಡಿ, ಸ್ಮಶಾನ ಭೂಮಿಯ ಕೊರತೆ ಹಾಗೂ ವಾಲ್ಮೀಕಿ ತಪೋವನ ಕುರಿತು ಗಮನಸೆಳೆದರು.

ವೀರ ಮದಕರಿ ನಾಯಕ ಪ್ರತಿಮೆ ಸ್ಥಾಪನೆಗೆ ಮನವಿ:
ಬೆಳಗಾವಿ ನಗರದ ಆರ್.ಪಿ.ಡಿ. ವೃತ್ತದ ಸಿಗ್ನಲ್ ಬಳಿ ಕೆಚ್ಚೆದೆಯ ವೀರ ಮದಕರಿ ನಾಯಕ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದು ಸಮಿತಿಯ ಸದಸ್ಯ ವಿಜಯ್ ತಳವಾರ ತಿಳಿಸಿದರು.
ಅ.13 ರಂದು ಆರ್.ಪಿ.ಡಿ ವೃತ್ತದಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು. ವಿಮಾನ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ, ರೈಲು ನಿಲ್ದಾಣಕ್ಕೆ ಸಿಂಧೂರ ಲಕ್ಷ್ಮಣ ನಾಮಕರಣ ಹಾಗೂ ಬಸ್ ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮ ಹೆಸರಿಡಲು ವಿವಿಧ ಸಂಘಟನೆಗಳ ಸಭೆಯಲ್ಲಿ ಇತ್ತೀಚಿಗೆ ಚರ್ಚಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮಹರ್ಷಿ ವಾಲ್ಮೀಕಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು, ಅನೇಕ ಮಹನೀಯರ ಅವಹೇಳನಕಾರಿ ಪೋಸ್ಟ್‍ಗಳನ್ನು ಹಾಕಲಾಗುತ್ತಿದ್ದು, ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಯಾರಾದರೂ ದೂರು ದಾಖಲಿಸಿದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಸೈಬರ್ ಅಪರಾಧ ನಡೆದಾಗ ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಎಸ್.ಪಿ. ನಿಂಬರಗಿ ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಡಿಸಿಪಿ ವಿಕ್ರಂ ಅಮಾಟೆ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.