ನನ್ನ ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ ರಾಜಕೀಯಕ್ಕೆ- ಸತೀಶ ಜಾರಕಿಹೊಳಿ ಇಂಗಿತ

0 92

ಬೆಳಗಾವಿ: ರಾಜ್ಯದ ರಾಜಕೀಯದ ಗೋಕಾಕದ ಪ್ರಭಾವಿ ಜಾರಕಿಹೊಳಿ ಕುಟುಂಬದ ಕುಡಿಗಳು ಒಬ್ಬೊಬ್ಬರಾಗಿ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿಕೊಡುತ್ತಿದ್ದಾರೆ. ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಕಿರಿಯ ಪುತ್ರ ಅಮರನಾಥ ಕೆಎಂಎಫ್‌ಗೆ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಸೇರಿದ್ದಾಗಿದೆ. ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಇಬ್ಬರು ಮಕ್ಕಳು ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ. ಅದರಲ್ಲಿಯೂ ಜಾರಕಿಹೊಳಿ ಕುಟುಂಬದ ಪುತ್ರಿಯೊಬ್ಬರು ರಾಜಕೀಯ ಸೇರ್ಪಡೆಯಾಗುತ್ತಿರುವುದು ವಿಶೇಷ.
ಮುಂದಿನ ದಿನಗಳಲ್ಲಿ ನನ್ನ ಪುತ್ರಿ ಪ್ರಿಯಾಂಕಾ, ಪುತ್ರ ರಾಹುಲ್ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂದು ಸ್ವತಃ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರೇ ಸ್ಪಷ್ಟಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಸದ್ಯ ರಾಜಕೀಯ, ಸಾಮಾಜಿಕ ಹಾಗೂ ಉದ್ಯಮ ಮೂರು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಅದೇ ರೀತಿ ನನ್ನ ಮಕ್ಕಳು ಕೂಡ ರಾಜಕೀಯ, ಸಾಮಾಜಿ ಮತ್ತು ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಲಿದ್ದಾರೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.
ಪುತ್ರ, ಪುತ್ರಿ ಸದ್ಯ ಉನ್ನತ ವ್ಯಾಸಾಂಗ ಮಾಡುತ್ತಿದ್ದು, ಅವರಿಗೆ ರಾಜಕೀಯ ಕೌಶಲ್ಯಗಳ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ಯಾವದೇ ಸಿನಿಮಾಗಳನ್ನು ನೋಡಿಲ್ಲ. ಇತ್ತೀಚಿನ ಚಿತ್ರಗಳಿಗಿಂತ ೩೦ ವರ್ಷಗಳ ಹಿಂದಿನ ಚಿತ್ರಗಳನ್ನು ನಾನು ಹೆಚ್ಚಾಗಿ ನೋಡುತ್ತೇನೆ. ಎಲ್ಲರಂತೆ ನನಗೂ ಕೂಡ ರಾಜಕುರ್ಮಾ ಅವರು ಅಚ್ಚುಮೆಚ್ಚಿನ ನಟರಾಗಿದ್ದಾರೆ. ಇನ್ನು ಊಟ ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಿ, ಬೆಂಗಳೂರು ಕಡೆಗೆ ಬಂದ್ರೆ ರಾಗಿ ಮುದ್ದೆ ಇಷ್ಟ ಬೆಳಗಾವಿಯಲ್ಲಿದ್ರೆ ಜೋಳದ ರೊಟ್ಟಿ ಇಷ್ಟ. ಆಹಾರದಲ್ಲಿ ಭೇದ ಭಾವವಿಲ್ಲ. ಇರೋದನ್ನು ತೃಪ್ತಿಯಿಂದ ಸೇವಿಸುತ್ತೇನೆ ಎಂದು ಹೇಳಿದ್ದಾರೆ.
ಬಾಲ್ಯದಿಂದಲೂ ನಾನು ಹಬ್ಬ ಹರಿದಿನ ಭಾಗಿಯಾಗದೇ ದೂರ ಉಳಿದಿರುವೆ. ಇನ್ನು ಶಾಪಿಂಗ್ ಅಂದ್ರುನೂ ನನಗೆ ಅಲರ್ಜಿ ಇದೆ. ಎಂದೂ ಕೂಡ ಬಟ್ಟೆ ಅಂಗಡಿಗಳಿಗೆ ಕಾಲಿಟ್ಟಿಲ್ಲ. ಪರಿಚಯಸ್ಥರ ಅಂಗಡಿಯಿಂದ ಆಪ್ತರೇ ನನಗೆ ಬಟ್ಟೆ ತೆಗೆದುಕೊಂಡು ಬರುತ್ತಾರೆ. ಫ್ರೀ ಇದ್ದ ಸಮಯದಲ್ಲಿ ಜನರಿಗಾಗಿಯೇ ನನ್ನ ಸಮಯವನ್ನು ಮೀಸಲಿಡುತ್ತೇನೆ. ಬೆಳಗಾವಿ, ಬೆಂಗಳೂರು ರಾಜ್ಯದ ಎಲ್ಲೆ ಹೋದರು ಜನರು ನನಗಾಗಿ ಬರುತ್ತಾರೆ ಅಂತವರಿಗಾಗಿ ಸಮಯ ಮೀಸಲಿಡುತ್ತೇನೆ.
ಸರಳ, ಸಜ್ಜನಿಕೆ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಸತೀಶ ಜಾರಕಿಹೊಳಿ ಅವರು, ಮಾನವ ಬಂಧುತ್ವ ವೇದಿಕೆ ಸಂಘಟನೆ ಮೂಲಕ ಮೌಢ್ಯದ ವಿರೋಧಿ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಯಶಸ್ವಿ ರಾಜಕಾರಣಿ,ಉದ್ಯಮಿಯಾಗಿ ಛಾಪು ಮೂಡಿಸಿದ್ದಾರೆ. ಮುಂದೆ ತಮ್ಮ ಮಕ್ಕಳು ರಾಜಕೀಯ, ಸಾಮಾಜಿಕ ಮತ್ತು ಉದ್ಯಮದಲ್ಲಿ ಮೂರು ಕ್ಷೇತ್ರದಲ್ಲಿ ಯಶಸ್ವಿಯಾಗಿ ಭವಿಷ್ಯ ಕಟ್ಟಿಕೊಳ್ಳುವ ಬಗ್ಗೆ ಆಶಾಭಾವ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.